ಆಹಾರದ ಜೋಪಾನಿಕೆ, ದಾಸ್ತಾನು (ಮನೆಯಲ್ಲಿ)
ಆರೋಗ್ಯಕ್ಕೆ, ಪೋಷಣೆಗೆ ತಕ್ಕ ಆಹಾರಗಳನ್ನು ಆರಿಸಿಕೊಂಡು ಕೆಡದಂತೆ, ಅವುಗಳ ಸತ್ತ್ವಗಳು ಹಾಳಾಗದಂತೆ ಎಚ್ಚರದಿಂದ ದಾಸ್ತಾನು ಮಾಡುವುದೇ ಮನೆಯಲ್ಲಿನ ಆಹಾರದ ಜೋಪಾನಿಕೆ. ದೇಹ ಪೋಷಣೆಗೆ ಮುಖ್ಯವಾದ, ಧಾನ್ಯಗಳು, ಬೇಳೆಗಳು, ಮಾಂಸಾಹಾರ ವಸ್ತುಗಳು, ಜಿಡ್ಡಿನ ಪದಾರ್ಥಗಳು, ತರಕಾರಿಗಳು ಮತ್ತು ಹಣ್ಣುಗಳ್ನು ಆರಿಸುವಾಗ ಅವು ಚೆನ್ನಾಗಿರುವುವೆಂದು ಮೊದಲು ಖಚಿತಪಡಿಸಿಕೊಳ್ಳಬೇಕು. ಕ್ರಿಮಿಕೀಟಗಳು, ಜೀವಾಣುಗಳು ಬಿದ್ದು ಆಗಲೇ ಕೆಡಲು ಮೊದಲಾಗಿದ್ದರೆ ಕೂಡಿಟ್ಟಾಗ ಅವು ಬೇಗನೆ ಕೆಟ್ಟು, ತಿನ್ನಬಾರದ್ದಾಗುತ್ತವೆ. ಅವುಗಳ ರುಚಿಗೆಟ್ಟು, ಕೆಟ್ಟ ವಾಸನೆ ಹಿಡಿಯುತ್ತವೆ. ಒಳ್ಳೆಯ ಆಹಾರ ಪದಾರ್ಥ ಆರಿಸಿದ ಮೇಲೆ ಅದರಲ್ಲಿ ಇರಬೇಕಾದ ಒಳ್ಳೆಯ ಗುಣಗಳು ಆದಷ್ಟು ಹೆಚ್ಚು ಕಾಲ ನಿಲ್ಲುವಂತೆ, ದಾಸ್ತಾನಿಡುವ ಜಾಗ, ಅಲ್ಲಿನ ಕಾವು, ತೇವಾಂಶ ಮುಂತಾದವನ್ನು ಹತೋಟಿಯಲ್ಲಿಡಬೇಕು. 

ಆಹಾರ ಪದಾರ್ಥಗಳು ಕೆಡಲು ಮುಖ್ಯವಾಗಿ ಎರಡು ಕಾರಣಗಳಿವೆ. ಹುದುಗು (ಯೀಸ್ಟ್), ಏಕಾಣುಜೀವಿಗಳು (ಬ್ಯಾಕ್ಟೀರಿಯಾ), ಬೊಜು (ಮೋಲ್ಡ್)-ಈ ತೆರನ ಜೀವಾಣುಗಳು; ಆಹಾರಗಳಲ್ಲೇ ಇರುವ ಕಿಣ್ವಗಳು (ಎಂಜೈಮುಗಳು) ಇಲ್ಲವೇ ರಾಸಾಯನಿಕಗಳು. 

	ಜೀವಾಣುಗಳಿಂದ ಆಹಾರ ಕೆಡಲು ಕೆಲವು ನಿದರ್ಶನಗಳಿವೆ : 
ಏಕಾಣುಜೀವಿಗಳಿಂದ : ಹಾಲು ಹುಳಿ ಬಂದು ಒಡೆದು ಹೋಗುವುದು, ಹಾಲನ್ನು ಚೆನ್ನಾಗಿ ಕಾಯಿಸದೆ ಬಿಸಿ ವಾತಾವರಣದಲ್ಲಿ ಇಟ್ಟಿದ್ದರೆ, ಹಾಲಿನಾಮ್ಲವನ್ನು (ಲ್ಯಾಕ್ಟಿಕ್ ಆಸಿಡ್) ತಯಾರಿಸುವ ಹಾಲಿನ ಏಕಾಣುಜೀವಿಗಳು ಬೆಳೆದು ಹುಳಿಹಿಡಿಸಿ ಕೆಡಿಸುವುವು. ಒಡೆದಿಟ್ಟ ತೆಂಗಿನಕಾಯಿ ಹೋಳಿನ ತಿರುಳಿನ ಮೇಲೆ ಬಿಳಿಯ ಇಲ್ಲವೇ ಬಣ್ಣದ ಏಕಾಣುಜೀವಿಗಳು ಬೆಳೆದು ಅಂಟಂಟಾಗುವುದು. 
ಹುದುಗಿಂದ : ಹಣ್ಣಿಗೆ ಬರುತ್ತಿರುವ ಮಾವಿನ ದೋರಗಾಯನ್ನು ಉಪ್ಪಿನ ಕಾಯಿಗೆ ಬಳಸಿದರೆ, ಬೇಗನೆ ಒಂದು ಬೆಳ್ಳನೆಯ ಪದರ ಮೇಲುಗಡೆ ಕಾಣಿಸಿಕೊಂಡು ಉಪ್ಪಿನಕಾಯಿ ಕೆಡುತ್ತದೆ. ಹುದುಗು (ಯೀಸ್ಟ್) ಜೀವಾಣುವಿನಿಂದ ಹೀಗಾಗುವುದು. ತೆಂಗಿನ ಮರದಿಂದ ಇಳಿಸಿದ ಸಿಹಿ ರಸ ನೀರಾ ಬೇಗನೆ ಹೆಂಡ ಆಗಿಬಿಡುವುದೂ, ಹಣ್ಣಿನ ರಸಗಳು ಹುಳು ಹತ್ತಿ ಕೆಡುವುದೂ ಹುದುಗಿನ ಜೀವಾಣುಗಳಿಂದಲೇ. 

ಬೂಜಿನಿಂದ : ಉಪ್ಪಿನಕಾಯಿ, ಹಣ್ಣುಗಳು, ತರಕಾರಿ, ಕೆನೆ, ಬ್ರೆಡ್‍ಗಳ ಮೇಲೆ ಬೇಗ ಬೆಳೆದುಕೊಂಡು, ಅವನ್ನು ಕೆಡಿಸುವ ಬಣ್ಣ ಬಣ್ಣದ ಬೂಷ್ಪುಗಳು ಬೂಜಿನ ಜಾತಿಗೆ ಸೇರಿದುವು. ಮಾಂಸಾಹಾರಗಳಲ್ಲೂ ಹಲವು ವೇಳೆ ಇವು ಬೆಳೆದು ಕೊಳೆತ ವಾಸನೆ ಹಿಡಿಸಿ ಅಂಟಂಟು, ಹುಳಿ ಆಗಿಸುತ್ತವೆ. 

ಕೀಣ್ವಗಳಿಂದ : ಆಹಾರಗಳಲ್ಲಿ ಮೊದಲೇ ಇರುವ ಕಿಣ್ವಗಳು ಹಲವು ವೇಳೆ ಆಹಾರದ ರುಚಿ, ವಾಸನೆಗಳನ್ನು ಕೆಡಿಸವುವು. ವಸೆಕಿಣ್ಣದಿಂದ (ಲೈಪೇಸ್) ಜಿಡ್ಡಿನ ಪದಾರ್ಥಗಳು ಒಡೆದು, ಕೆಟ್ಟು ಕಮಟು (ರ್ಯಾನ್ಸಿಡಿಟಿ) ಹಿಡಿಸುತ್ತವೆ, ಮುಗ್ಗಿಸುತ್ತವೆ. ತೆಂಗಿನಕಾಯಿ, ಕಡಲೆಕಾಯಿ ಬೀಜ, ಬೆಣ್ಣೆ ಮುಂತಾದವು ಕೆಟ್ಟು ವಾಸನೆ ಬರುವುದು ಇದರಿಂದಲೇ. ಮಾಂಸಾಹಾರಗಳು, ವಿಶೇಷವಾಗಿ ಮೀನುಗಳು, ಪ್ರೋಟೀನುಗಳನ್ನು ಒಡೆಕೆಡಹುವ ಪ್ರೋಟೀನುಲಯಕ (ಪ್ರೋಟಿಯೊಲಿಟಕ್) ಕಿಣ್ವಗಳ ಚಟುವಟಿಕೆಯಿಂದ ಬೇಗ ಕೊಳೆಯುತ್ತವೆ. 

ಬೇರೆ ಕಾರಣಗಳು : ಗಾಳಿ ಹೆಚ್ಚಾಗಿದ್ದಾಗ ಕೆಲವು ಆಹಾರಗಳಲ್ಲಿನ ಕೊಬ್ಬು ಆಮ್ಲಜನಕಗೂಡಿ (ಆಕ್ಸಿಡೈಸ್) ಮುಗ್ಗಿದ ವಾಸನೆ ಬರುತ್ತವೆ. ಬೆಳಕು ಹೆಚ್ಚಿದ್ದರೆ ಕೆಲವು ಆಹಾರಗಳು ಅವುಗಳ ಸೊಗಸಾದ ಬಣ್ಣವನ್ನು ಕಳೆದುಕೊಳ್ಳುತ್ತವೆ. ಆಮ್ಲಜನಕ ತಾಕಿ ಜೀವಾತುಗಳು ಹಾಳಾಗುತ್ತವೆ. 

ಆಹಾರ ಪದಾರ್ಥಗಳು ಕೆಡುವುದು ಅವನ್ನು ಕೂಡಿಡುವ, ದಾಸ್ತಾನು ಮಾಡುವ ಜಾಗದ ವಾತಾವರಣ, ಎಂದರೆ ಅಲ್ಲಿನ ಕಾವು, ತೇವ, ಚೊಕ್ಕತೆ, ರಾಸಾಯನಿಕಗಳು, ಜೀವಿವಿರೋಧಕಗಳು(ಆಂಟಿಬಯೋಟಿಕ್ಸ್), ಅನಿಲಗಳು-ಇವನ್ನು ಅನುಸರಿಸುತ್ತವೆ. 

	1. ಕಾವು : ರಾಸಾಯನಿಕ ಬದಲಾವಣೆಗಳೂ ಜೀವಾಣುಗಳ ಬೆಳೆವಣಿಗೆಯೂ ಕಾವಿನ ಮಟ್ಟ ಏರಿದಂತೆಲ್ಲ(ಒಂದು ಮಿತಿಯವರೆಗೆ) ಹೆಚ್ಚುತ್ತದೆ. ಆದ್ದರಿಂದ ಶೀತಕದಲ್ಲಿ (ರೆಫ್ರಿಜರೇಟರ್) ಇರಿಸಿದ ಪದಾರ್ಥಗಳು ಬೇಗ ಹಾಳಾಗವು. ಬೇಸಗೆ ಕಾಲದಲ್ಲಿ ಆಹಾರಗಳು ಬೇಗ ಕೆಡುತ್ತವೆ. ಬೇಯಿಸಿದ ಪದಾರ್ಥಗಳಾದ ಸಾರು, ಅನ್ನ ಹಳಸುತ್ತವೆ. ಹಾಲು ಹುಳಿ ಬಂದು ಒಡೆಯುತ್ತದೆ. ಆದರೆ, ಆಹಾರವನ್ನು ಚೆನ್ನಾಗಿ ಕುದಿಸಿಟ್ಟರೆ ಬಹುಪಾಲು ಜೀವಾಣುಗಳು ನಾಶವಾಗಿ ಹೀಗೆ ಕೆಡುವುದನ್ನು ತಡೆಯುತ್ತವೆ. 

	2. ತೇವ : ಆಹಾರಗಳ್ನು ಕೆಡಿಸುವ-ಜೀವಾಣುಗಳ ಬೆಳೆವಣಿಗೆಗೆ ನೀರಲ್ಲಿ ಕರಗಿರುವ ಪೋಷಕ ವಸ್ತುಗಳು ಬೇಕೇ ಬೇಕು. ಅಂದ ಮೇಲೆ ನೀರೂ ಸಾಕಷ್ಟು ಇರಬೇಕು. ಈ ಕಾರಣದಿಂದಲೇ ನೀರಿಲ್ಲದಂತೆ ಒಣಗಿಸಿದ ಪದಾರ್ಥಗಳು ಬೇಗ ಕೆಡುವುದಿಲ್ಲ. ಆದರೆ, ಜೀವಾಣುಗಳ ಬೆಳೆವಣಿಗೆಗೆ ಇಂತಿಷ್ಟೇ ನೀರಿನ ಅಂಶ ಇರಬೇಕೆಂದು ಹೇಳಬಾರದು. ಅದು ಪದಾರ್ಥ, ಅದರ ಆಮ್ಲತೆ, ಅದರಲ್ಲಿ ಉಪ್ಪು, ಸಕ್ಕರೆ ಮುಂತಾದವಂತಿರುತ್ತದೆ. ಧಾನ್ಯಗಳಲ್ಲಿ 15% ಪಾಲಿಗಿಂತ ಕಡಿಮೆ ನೀರಿದ್ದರೆ ಏಕಾಣುಜೀವಿಗಳೇ ಮುಂತಾದುವು ಬೆಳೆಯವು. ಮಸಾಲೆಬಾಡು (ಸಾಸೇಜ್) ಮುಂತಾದ ಮಾಂಸಾಹರಗಳಲ್ಲಿ ಉಪ್ಪು ಜೊತೆಗಿದ್ದರೆ 35% ನೀರಿದ್ದರೊ ಕೆಡುವುದಿಲ್ಲ. ಆದರೆ ಇದನ್ನು ಉಪ್ಪು ಹಾಕದೆ ಜೋಪಾನಿಸಬೇಕಾದರೆ ನೀರಿನ ಅಂಶ 20% ಮೀರಿರಬಾರದು. ಗಾಳಿಯಲ್ಲಿನ ತೇವದ ಅಂಶ 60% ಕ್ಕೂ ಹೆಚ್ಚಿದ್ದರೆ, ಕಡಿಮೆ ನೀರಿನ ಅಂಶ ಇರುವ ಆಹಾರ ಪದಾರ್ಥಗಳ ಮೇಲೂ ಬೊಜುಗಳು ಬೆಳೆಯಲು ಮೊದಲಿಡುತ್ತವೆ. ಮಳೆಗಾಲದಲ್ಲಿ ಹಪ್ಪಳ, ಕುಸುಬಲಕ್ಕಿ, ರೊಟ್ಟಿಗಳ ಮೇಲೆ ಬೇಗ ಬೂಜುಗಳು ಬೆಳೆಯುವುದು ಇದರಿಂದಲೇ, ತುಸು ತೇವವಿರುವ ತಿಂಡಿ ತಿನಿಸುಗಳನ್ನು, ಅದರಲ್ಲೂ ಬಿಸಿಯಲ್ಲೇ ಡಬ್ಬ, ಸೀಸೆಗಳಲ್ಲಿ ಭದ್ರವಾಗಿ ಮುಚ್ಚಿಟ್ಟುಬಿಟ್ಟರೆ (ಉದಾ : ಕೊಬ್ಬರಿಮಿಠಾಯಿ, ರವೆಉಂಡೆ, ಗಜ್ಜರಿಹಲ್ವ), ಒಳಗಿನ ಗಾಳಿಯ ತೇವದ ಅಂಶ ಬಹಳ ಹೆಚ್ಚಾಗಿ, ಬೇಗನೆ ಬೂಜುಗಳು ಬೆಳೆದು ಬಿಡುತ್ತದೆ. ಒಣಗಿಸಿಟ್ಟ ಆಹಾರ ಪದಾರ್ಥಗಳಲ್ಲಿ ನೀರಿನ ಅಂಶ ಶೇಕಡ 10-15 ಪಾಲಿನಷ್ಟಿದ್ದರೆ ಜೀವಾಣುಗಳೇನೋ ಬೆಳೆಯವು. ಆದರೆ, ಇಷ್ಟು ತೇವವಿರುವಾಗ ಕಿಣ್ವಗಳೂ ಆಮ್ಲಜನಕಗೂಡಿಕೆಯೂ ಆಹಾರವನ್ನೂ ಕೆಡಿಸುವುವು. ಆದ್ದರಿಂದ, ಈ ಆಹಾರಗಳಲ್ಲಿನ ತೇವಾಂಶ ಇನ್ನೂ ಕಡಿಮೆಯಿರಬೇಕು. 

1. ಮೊದಲಿನ ಚೊಕ್ಕತೆ : ಕೂಡಿಡಬೇಕಿರುವ ಆಹಾರ ಪದಾರ್ಥ ಮೊದಲೇ ಚೊಕ್ಕವಾಗಿಲ್ಲದಿದ್ದಲ್ಲಿ ದಾಸ್ತಾನು ಮಾಡಿದಾಗ ಬೇಗನೇ ಕೆಡುತ್ತದೆ. ಹಣ್ಣು, ತರಕಾರಿಗಳು, ಮೊಟ್ಟೆ, ಮಾಂಸಾಹಾರಗಳನ್ನು ಕೊಳ್ಳುವಾಗ, ಅವು ಹಸಿಯಾಗಿ ಹೊಚ್ಚ ಹೊಸವಾಗಿ ತಾಜಾ ಆಗಿರಬೇಕು. ಕೊಳೆ, ಧೂಳು, ಮಣ್ಣು ಇದ್ದರೆ ಚೆನ್ನಾಗಿ ತೊಳೆದಿಡಬೇಕು. 

2. ರಾಸಾಯನಿಕಗಳು : ಕೆಲವು ಆಹಾರಗಳನ್ನು ಉಪ್ಪು, ಸಕ್ಕರೆ, ಹುಳಿಗಳ ನೆರವಿಂದ ಜೋಪಾನಿಸುವ ರೂಢಿಯಿದೆ. ಈ ರಾಸಾಯನಿಕಗಳು ಜೀವಾಣುಗಳ ಬೆಳೆವಣಿಗೆಯನ್ನು ತಡೆಗಟ್ಟಿ, ಆಹಾರವನ್ನು ಕಾಪಾಡುತ್ತವೆ. ಉದಾಹರಣೆಗೆ, ಉಪ್ಪಿನಿಂದ ಉಪ್ಪಿನಕಾಯಿ, ಸಕ್ಕರೆಯಿಂದ ಹಣ್ಣಿನ ಮುರಬ್ಬ (ಹಲ್ವ), ಹುಳಿ ಮತ್ತು ಉಪ್ಪಿನಿಂದ ಮೀನುಗಳು ಜೋಪಾನವಾಗಿರುತ್ತವೆ. ಹುಳಿ (ಆಮ್ಲ) ಇದ್ದ ಕಡೆ ಅನೇಕ ಏಕಾಣುಜೀವಿಗಳು ಬೆಳೆಯಲಾರವು. ಜೀವಾಣುಗಳು ಬದುಕಿರಲು ಮುಖ್ಯವಾಗಿ ಬೇಕಾದ ನೀರನ್ನು ಉಪ್ಪು, ಸಕ್ಕರೆಗಳು ಅವುಗಳ ಮೈಯಿಂದ ತೆಗೆದುಬಿಡುವುದರಿಂದ ಅವು ಬೆಳೆಯಲಾರದಾಗುತ್ತದೆ. 

3. ಜೀವಿರೋಧಕಗಳು : ಕೆಲವು ಆಹಾರ ಪದಾರ್ಥಗಳಲ್ಲಿ ಮೊದಲೇ ಇರುವ ಚಂಚಲ (ಎಸ್ಸೆಂಷಿಯಲ್) ತೈಲಗಳು, ರಾಸಾಯನಿಕಗಳು ಜೀವಾಣುಗಳ ಬೆಳೆವಣಿಗೆಯನ್ನು ತಡೆವಂತಿರುತ್ತವೆ. ಅಂದರೆ, ಇವು ಜೀವಿರೋಧಕಗಳು. ಸಂಬಾರ ದಿನಸಿಗಳ ಚಂಚಲ ತೈಲಗಳು, ಎಲೆಕೋಸು, ಈರುಳ್ಳಿ, ಕೆಂಪು ಮೂಲಂಗಿ ಮುಂತಾದವಲ್ಲಿರುವ ರಾಸಾಯನಿಕಗಳು ಆಹಾರವನ್ನು ಕೊಳೆಸುವ ಕೆಲವು ಜೀವಾಣುಗಳನ್ನು ನಾಶಮಾಡುವಂತಿರುವುವು. 

4. ಅನಿಲಗಳು : ಅನೇಕ ಜೀವಾಣುಗಳ ಬೆಳೆವಣಿಗೆಗೆ ಗಾಳಿಯಲ್ಲಿರುವ ಆಮ್ಲಜನಕ ಬಹು ಮುಖ್ಯವಾಗಿ ಬೇಕು. ಆದ್ದರಿಂದ ಆಹಾರವಿಡುವ ಜಾಗದಲ್ಲಿ ಗಾಳಿ ಇಲ್ಲವಾದರೆ, ಸಾರಜನಕ ಇದ್ದರೆ ಜೀವಾಣುಗಳ ಬೆಳೆವಣಿಗೆಯನ್ನು ತಡೆಯಬಹುದು. ಆಹಾರಗಳನ್ನು ಮುದ್ರೆಹಾಕಿದ ಡಬ್ಬಗಳಲ್ಲಿ (ಸೀಲ್ಡ್ ಟಿನ್ಸ್) ಹೀಗೆ ಕೂಡಿಡುವುದು ಒಂದು ನಿದರ್ಶನ. ಪಾನೀಯಗಳಲ್ಲಿ ಹಾಲು, ಕ್ರಷ್, ನೀರಾ ಮುಂತಾದವನ್ನು ಇಂಗಾಲಾಮ್ಲತುಂಬಿ ಕೆಡದಂತಿರಿಸಬಹುದು. ಆಮ್ಲಜನಕವಿಲ್ಲದಂತೆ ಆದಾಗ ನೀರ್ಗಳೆದು ಒಣಗಿಸಿದ ಆಹಾರಗಳೊ ಕರಿದ ಪದಾರ್ಥಗಳೂ ರಾಸಾಯನಿಕ ಬದಲಾವಣೆಗಳಿಂದ ವಾಸನೆ, ರುಚಿಗಳಲ್ಲಿ ಕೆಡುವುದು ನಿಲ್ಲುತ್ತದೆ. ಇವನ್ನು ಸಾರಜನಕ ತುಂಬಿದ ಡಬ್ಬಗಳಲ್ಲಿ ತುಂಬಿಡುವುದು ಇದಕ್ಕಾಗಿಯೇ. ಇಂದಿನ ರೀತಿಯಲ್ಲಿ ತಯಾರಿಸಿದ, ನೀರ್ಗಳೆದು ಒಣಗಿಸಿದ ಹಣ್ಣು, ಮೀನು, ಮಾಂಸ, ತರಕಾರಿ-ಮುಂತಾದವನ್ನೂ ಹುರಿದ ಗೋಡಂಬಿ, ಬಾದಾಮಿ, ವಾಲ್‍ನಟ್ ಮುಂತಾದವನ್ನೂ ಸಾರಜನಕ ತುಂಬಿ ಮುದ್ರೆ ಹಾಕಿದ ಡಬ್ಬಗಳಲ್ಲಿ ಕೂಡಿಡುತ್ತಾರೆ. 

ಆಹಾರ ಒಟ್ಟಯಿಕೆ : ಎಲ್ಲ ಬಗೆಯ ಆಹಾರ ಪದಾರ್ಥಗಳನ್ನೂ ಕೆಡದಂತೆ ಕೂಡಿಡಲು ಒಂದೇ ಬಗೆಯ ಕ್ರಮವನ್ನು ಅನುಸರಿಸಲಾಗದು, ಆಯಾ ಪದಾರ್ಥದ ಗುಣಕ್ಕೆ ತಕ್ಕಂತೆ ವಿಧಾನ ಹುಡುಕಬೇಕು. ಜೀವಾಣುಗಳ ಬೆಳೆವಣಿಗೆ, ರಾಸಾಯನಿಕ ಬದಲಾವಣೆಗಳನ್ನು ತಡೆಗಟ್ಟುವುದಲ್ಲದೆ, ಕೈಗೆತ್ತಿಕೊಂಡ ವಿಧಾನ ಆಹಾರದ ಸತ್ತ್ವಗಳಿಗೆ ಹಾನಿ ತರದಂತಿರಬೇಕು. ಕಿತ್ತುತರುವ, ಕೊಂಡುತರುವ ಆಹಾರ ಚೊಕ್ಕವೂ ಹಸಿಯದಾಗಿ ಹೊಚ್ಚ ಹೊಸದೂ ಆಗಿರಬೇಕು. ಬಹಳ ಕಳಿತಿದ್ದು ಜೀವಾಣುಗಳಿಂದ ಕೆಡಲು ಆರಂಭಿಸಿರುವುದೂ ಕಿತ್ತು ಬಹಳ ದಿನಗಳಾಗಿ ಒಣಗುತ್ತಿರುವುದೂ ಸಲ್ಲದು. ತರಕಾರಿಗಳು ಬಲಿತಿರುವುದು, ಬಾಡಿರುವುದು, ಕೊಳೆಯಲಿಡುತ್ತಿರುವುದು ಕೂಡಲು. ಧೂಳು, ಮಣ್ಣು, ಇವಿದ್ದರೆ ಒಳ್ಳೆಯ ನೀರಿನಲ್ಲಿ ತೊಳೆದು, ಆಮೇಲೆ ಒರೆಸಿಡಬೇಕು. ಇಲ್ಲವಾದರೆ ಬೂಜುಗಳು ಬೆಳೆಯಲು ಅನುಕೂಲ. ಧಾನ್ಯಗಳಲ್ಲಿ ಕೀಟಗಳು ಸೇರಿರಕೊಡದು, ಮುಗ್ಗಲು ವಾಸನೆ ಬಂದಿರಬಾರದು, ಕೂಡಿಸಿಟ್ಟಾಗ ಕೀಟಗಳು ಹೆಚ್ಚಿಕೊಂಡು ಧಾನ್ಯವನ್ನು ತಿಂದು ಜೊಳ್ಳು ಮಾಡುತ್ತವೆ. ಆಹಾರ ಹೊಲಸಾಗುತ್ತದೆ. ಮೊದಲೇ ಮುಗ್ಗಲು ವಾಸನೆಯಿದ್ದರೆ, ಬರುಬರುತ್ತ ಅದು ಇನ್ನೂ ಹೆಚ್ಚಿ ದವಸ ಧಾನ್ಯ ತಿನ್ನದಂತಾಗುತ್ತದೆ. ಬೆಣ್ಣೆಯಲ್ಲಿ ನೀರಿ ಅಂಶ ಸಾಕಷ್ಟು ಕಡಿಮೆಯಿರಬೇಕು. ಹೆಚ್ಚಿದ್ದರೆ (ಶೇಕಡ 25) ಬೇಗನೆ ಕೆಡುತ್ತದೆ. ಅಡಿಗೆಯ ಎಣ್ಣೆಗಳು ಒಳ್ಳೆಯ ಎಣ್ಣೆಬೀಜಗಳಿಂದ ಮಾಡಿರಬೇಕು. ಇಲ್ಲವಾದರೆ ಬಿಡಿಯಾದ ಕೊಬ್ಬಿನ ಆಮ್ಲಗಳು (ಫ್ರೀಫ್ಯಾಟಿ ಆಸಿಡ್ಸ್) ಹೆಚ್ಚಾಗಿದ್ದು ಕಮಟು ವಾಸನೆ ಬರುವುದು; ಕಾಯಲು ಇಟ್ಟಾಗ ಉಕ್ಕಿ ಬರುವುದು. ಮಾಂಸಾಹಾರಗಳು ತಾಜಾ ಆಗಿರಬೇಕು. ಮೀನುಗಳು ಬಹು ಜಾಗ್ರತೆ ಕೆಡುವುದರಿಂದ ಅವನ್ನು ಹಿಡಿದಮೇಲೆ ಆದಷ್ಟು ಬೇಗ ಚೊಕ್ಕಗೊಳಿಸಿ ಕೂಡಿಡಬೇಕು. ಮೊಟ್ಟೆಗಳು ಹೊಸವಾಗಿರಬೇಕು; ಹೊರಗಡೆ ಕೊಳೆ ಅಂಟಿದ್ದರೆ ತೊಳೆದು ಒರಸಿಡಬೇಕು. 

ಶೀತಕದಲ್ಲಿ ದಾಸ್ತಾನು : ಆಹಾರಗಳ ಕಾವನ್ನು ತೀರ ತಗ್ಗಿಸುವುದರಿಂದ ಅವನ್ನು ಕೆಡಿಸುವ ಜೀವಾಣುಗಳ ಬೆಳೆವಣಿಗೆಯನ್ನೂ ರಾಸಾಯನಿಕ ಚಟುವಟಿಕೆಯನ್ನೂ ಕುಂದಿಡಬಹುದು. ಆದರೆ ಶೀತಕದಲ್ಲಿಡುವ ಮೊದಲು ಅವನ್ನು ಅಣಿಮಾಡುವ ಕ್ರಮ, ಒಳಗಿಡುವ ರೀತಿ, ಬೇರೆ ಬೇರೆ ಆಹಾರಗಳಿಗೆ ಬೇರೆಬೇರೆಯಾಗಿರುತ್ತದೆ. 

ಹಣ್ಣು, ತರಕಾರಿಗಳನ್ನು ಚೆನ್ನಾಗಿ ತೊಳೆದು, ಒರಸಿ ಬಾಡಿ ಹೋಗದಂತೆ ಪಾಲಿಥೀನ್ ಚೀಲಗಳಲ್ಲಿ ತುಂಬಿ ಶೀತಕದ ಅರೆಯ ಮೇಲಿಡಬೇಕು. ಆದರೆ, ಸ್ಟ್ರಾಬೆರಿ, ರಾಸ್ಪ್‍ಬೆರಿ ಮುಂತಾದವನ್ನು ನೀರು ಸೇರಿಸದೆ ಹಾಗೇ ಹರಡಿಬಿಡಬೇಕು. ನೀರಿದ್ದರೆ ಬೂಜು ಬೆಳೆಯುತ್ತದೆ. ಕೋಳಿ, ಕುರಿ, ಆಡುಗಳ ಮಾಂಸದ ದೊಡ್ಡ ತುಂಡುಗಳನ್ನು ಹೊರಗಡೆ ಚೆನ್ನಾಗಿ ತೇವದ ಬಟ್ಟೆಯಿಂದ ಒರಸಿ, ನೀರು ಸೇರದಂತೆ ಪಾಲಿಥೀನ್ ಹಾಳೆಗಳಲ್ಲಿ ಬಿಗಿಯಾಗಿ ಸುತ್ತಿ ಇಡಬೇಕು. ಹೀಗೆ ಮಾಡಿಟ್ಟರೆ, ಇವನ್ನು 5-6 ದಿನಗಳವರೆಗೆ ಜೋಪಾನಿಸಬಹುದು. ಅಡಿಗೆಗಾಗಿ ಮೀನುಗಳನ್ನು ಹಿಡಿದಮೇಲೆ ಆದಷ್ಟು ಬೇಗ (ಕರುಳು ಮುಂತಾದವನ್ನು ತೆಗೆದು) ಚೊಕ್ಕಗೊಳಿಸಿ ಪಾಲಿಥೀನ್ ಹಾಳೆಯಲ್ಲಿ ಸುತ್ತಿಡಬೇಕು. ಒಂದೆರಡು ದಿನಕ್ಕಿಂತ ಹೆಚ್ಚಾಗಿ ಇಡಬಾರದು. ಬೆಣ್ಣೆಯಲ್ಲಿ ಬೇರೆ ತೆರನ ವಾಸನೆಗಳು ಸೇರದಂತೆ ಭದ್ರವಾಗಿ ಮುಚ್ಚಿಡಬಹುದಾದ ಡಬ್ಬಿಯಲ್ಲಿಡಬೇಕು. ಒಂದೆರಡು ವಾರ ಈ ರೀತಿ ಇಡಬಹುದು. ಹಾಲನ್ನು ಸೀಸೆಗಳಲ್ಲಿ ತುಂಬಿ ಮುಚ್ಚಿ ಹಾಗೇ ಇಡಬೇಕು. ಮೊಟ್ಟೆಗಳನ್ನು ಒರೆಸಿ ದಪ್ಪವಾದ ತುದಿಗಳು ಮೇಲೆ ಬರುವಂತೆ ನಿಲ್ಲಿಸಿಡಬೇಕು. 

ನೀರ್ಗಲ್ಲಾಗುವಷ್ಟು ತಂಪುಗೊಳಿಸಿದ ಆಹಾರಗಳನ್ನು ಅಷ್ಟೇ ನೀರ್ಗಲ್ಲಾಗಿರುವಂತೆ ಇರಿಸುವ ಶೀತಕಗಳಲ್ಲಿ ತಿಂಗಳುಗಟ್ಟಳೆ ಕಾಪಾಡಬಹುದು. ಇವುಗಳ ಬಳಕೆ ಭಾರತದಲ್ಲಿ ಇನ್ನೂ ಬಂದಿಲ್ಲ. 

ಡಬ್ಬ, ಸೀಸೆಗಳಲ್ಲಿ ತುಂಬಿದ ಆಹಾರಗಳು : ಕಾಯಿಸಿ ಕೆಡದಂತಿರಿಸುವ ಈ ಆಹಾರಗಳನ್ನು ಶೀತಕದಲ್ಲಿ ಇಡಬೇಕಾಗಿಲ್ಲ. ಇವನ್ನು ಬೆಳಕು ಹೆಚ್ಚಿಲ್ಲದ, ತಂಪಾದ ಜಾಗದಲ್ಲಿ ಕೂಡಿಡಬೇಕು. ಒಂದು ಸಾರಿ ಮುದ್ರೆಯನ್ನು ಒಡೆದು ತುಸು ಬಳಸಿದ ಡಬ್ಬಿ, ಸೀಸೆಯನ್ನು ಆಮೇಲೆ ಶೀತಕದಲ್ಲೇ ಇಟ್ಟಿರಬೇಕು. ಇಲ್ಲವಾದರೆ, ಗಾಳಿಯಲ್ಲಿ ತೇಲಿ ಬಂದು ಸೇರುವ ಜೀವಾಣುಗಳಿಂದ ಅವು ಕೆಡಲಿಡುತ್ತವೆ. ಬ್ರೆಡ್, ಬಿಸ್ಕತ್ತು, ಚಪಾತಿ ಮುಂತಾದವನ್ನು ಒಣಗದಂತೆ ಪಾಲಿಥೀನ್, ಇಲ್ಲವೇ ಅಲ್ಯೂಮಿನಿಯಮ್ ರೇಕುಗಳಲ್ಲಿ (ಫಾಯಿಲ್ಸ್) ಸುತ್ತಿ ಶೀತಕದಲ್ಲಿಡಬೇಕು. 

ಬೇಯಿಸಿದ ತರಕಾರಿ, ಮೊಟ್ಟೆ, ಹಾಲು, ಮಾಂಸ, ಮೀನು ಹಾಕಿರುವ ಅಡಿಗೆಗಳನ್ನು ಜೋಪಾನಿಸುವಾಗ ತುಂಬಾ ಎಚ್ಚರದಿಂದಿರಬೇಕು. ಇವು ಬಲು ಬೇಗ ಕೆಡುತ್ತವೆ. ಆಹಾರ ವಿಷವೇರುಸುವ ಜೀವಾಣುಗಳು ಬೆಳೆದು ಅಪಾಯಕರವಾಗಬಹುದು. ಆದ್ದರಿಂದ ಇವನ್ನು ಭದ್ರವಾಗಿ ಮುಚ್ಚಿದ ಪಾತ್ರೆಗಳಲ್ಲಿ ಶೀತಕದಲ್ಲಿ ಇಟ್ಟಿರಬೇಕು. ಒಂದೆರಡು ದಿನಕ್ಕಿಂತ ಹೆಚ್ಚಾಗಿ ಇಟ್ಟುದನ್ನು ಬಳಸಬಾರದು. 

(ನೋಡಿ- ಆಹಾರದ-ಜೋಪಾಸನೆ) 
(ನೋಡಿ- ಆಹಾರಗಳ-ನೀರ್ಗಳೆತ)
(ನೋಡಿ- ಆಹಾರ-ವಿಷವೇರಿಕೆ,-ಏಕಾಣುಜೀವಿಕ)
										  	 (ವೈ.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ